ಎಸಿ ಕಚೇರಿಗೆ ಠಾಣೆ ಸ್ಥಳಾಂತರ : ಹಲವು ವರ್ಷಗಳ ಮಳೆನೀರ ತೊಂದರೆಗೆ ಮುಕ್ತಿ
ಸೇಡಂ: ಪ್ರತಿ ಮಳೆಗಾಲದಲ್ಲಿ ಮೊಳಕಾಲೆತ್ತರಕ್ಕೆ ನೀರು. ಸಾವಿರಾರು ಜನರ ಮೇಲಿನ ಎಫ್.ಐ.ಆರ್, ದೂರುಗಳು ನೀರಿನಲ್ಲಿ ಹೋಮ ಮಾಡಿದಂತಹ ಅನುಭವ. ಅವುಗಳನ್ನು ಹೇಗೊ ಕಾಪಾಡಿ, ಒಣಗಿಸಿ ಶೇಖರಿಸುವ ಪೊಲೀಸ್ ಸಿಬ್ಬಂದಿ. ಇನ್ನೊಂದೆಡೆ ಸಾರ್ವಜನಿಕರಿಗೆ ರಕ್ಷಣ ನೀಡುವವರೆ ನೀರಲ್ಲಿ ಮುಳುಗುವ ದಯನೀಯ ಸ್ಥಿತಿ.
ಸುಮಾರು ೩೦ಕ್ಕೂ ಅಧಿಕ ವರ್ಷಗಳಿಂದ ಇಂತಹ ದುಸ್ಥಿತಿಯಲ್ಲಿದ್ದ ಸೇಡಂ ಪೊಲೀಸ್ ಠಾಣೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಮಳೆ ಬಂತೆAದರೆ ಸಾಕು ಠಾಣೆಯ ಪ್ರತಿ ಕೋಣೆಯಲ್ಲಿ ಮೊಳಕಾಲೆತ್ತರಕ್ಕೆ ನೀರು ಜಮಾವಣೆಯಾಗುತ್ತಿತ್ತು. ನೀರಾದರೆ ಓಕೆ ಚರಂಡಿ ನೀರು ಸಹ ಸೇರಿಕೊಂಡು ಪೊಲೀಸ್ ಠಾಣೆ, ದುರ್ನಾತದ ಠಾಣೆಯಾಗಿ ಮಾರ್ಪಡಾಗುತ್ತಿತ್ತು. ಅನೇಕ ವರ್ಷಗಳಿಂದ ಹೊಸ ಪೊಲೀಸ್ ಠಾಣೆ ನಿರ್ಮಿಸುವಂತೆ ಸರಕಾರಕ್ಕೆ, ಸಚಿವರಿಗೆ, ಪೊಲೀಸ್ ಇಲಾಖೆಗೆ ಸಾರ್ವಜನಿಕರು ದುಂಬಾಲು ಬಿದ್ದರೂ ಪ್ರಯೋಜನವಾಗಿರಲಿಲ್ಲ. ಈಗ ಕಾಲ ಕೂಡಿಬಂದಿದ್ದು, ಕಡೆಗೂ ಖಾಲಿಯಾಗಿರುವ ಸಹಾಯಕ ಆಯುಕ್ತರ ಕಚೇರಿಗೆ ಪೊಲೀಸ್ ಠಾಣೆ ಸ್ಥಳಾಂತರಿಸಲಾಗುತ್ತಿದೆ.
ಇದರಿAದ ಹಲವು ವರ್ಷಗಳಿಂದ ಪೊಲೀಸರು ಪಡುತ್ತಿದ್ದ ಸಂಕಷ್ಟಕ್ಕೆ ತೆರೆ ಬಿದ್ದಂತಾಗಿದೆ. ಈಗಾಗಲೆ ಖಾಲಿಯಾಗಿರುವ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಕೈಗೊಳ್ಳಲಾಗಿದೆ. ಅತಿ ಶೀಘ್ರದಲ್ಲೆ ಪಿಎಸ್‌ಐ ಕಚೇರಿ ಸ್ಥಳಾಂತರವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಸಹಾಯಕವಾಗುವುದರೊಂದಿಗೆ ಇಲಾಖೆಗೆ ದೊಡ್ಡ ಕಚೇರಿಯಲ್ಲಿ ಸೇವೆ ಸಲ್ಲಿಸುವ ಅವಕಾಶವೂ ದೊರೆಯಲಿದೆ.
ಈಗಿರುವ ಪುರಾತನ ಪೊಲೀಸ್ ಠಾಣೆ ಬ್ರಿಟಿಷರ್ ಕಾಲದ್ದು ಎನ್ನಲಾಗಿದ್ದು, ಅದನ್ನು ಕಡೆವಲು ನಾನಾ ತೊಡಕುಗಳಿದ್ದವು. ಇತ್ತ ಹೊಸ ಠಾಣೆ ಮಾಡಬೇಕೆಂದರೂ ಯಾಕೊ ಕಾಲ ಕೂಡಿಬಂದಿರಲಿಲ್ಲ. ಕೆಲ ದಿನಗಳ ಹಿಂದೆಯಷ್ಟೆ ಸಹಾಯಕ ಆಯುಕ್ತರ ಕಚೇರಿ ಹೊಸ ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಆದ ಕಾರಣ, ಜನ ಎಸಿ ಕಚೇರಿಯಲ್ಲೆ ಪೊಲೀಸ್ ಠಾಣೆ ನಡೆಸಿ ಎಂದು ಮನವಿ ಮಾಡಿದ್ದರು. ಈಗ ಜನರ ಮನವಿಗೆ ಫಲ ದೊರಕಿದೆ.
0 Comments