ಸೇಡಂ: ತಾಲೂಕಿನ ಕೋಡ್ಲಾ ಬೆನಕನಹಳ್ಳಿಯ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಮತ್ತೋರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಬೆನಕನಹಳ್ಳಿ ಗ್ರಾಮದ ಇಂದ್ರಕುಮಾರ ದೇವಪ್ಪ (೩೨) ಮೃತ ವ್ಯಕ್ತಿಯಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಹೇಳಲಾಗಿದೆಯಾದರೂ, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕೇವಲ ಎರಡೇ ತಿಂಗಳಲ್ಲಿ ಇಬ್ಬರು ಕಾರ್ಮಿಕರು ಕಾರ್ಖಾನೆಯಲ್ಲಿ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಈಗ ಇಂದ್ರಕುಮಾರ ಮೃತಪಟ್ಟಿದ್ದು, ಯಾವ ಆಸ್ಪತ್ರೆಯ ವರದಿಗಳಿಲ್ಲದೆ ಸಿಮೆಂಟ್ ಕಾರ್ಖಾನೆಯ ಅಧಿಕಾರಿಗಳೇ ಹೃದಯಾಘಾತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದಿನೆ ದಿನೆ ಕಾರ್ಖಾನೆಯಲ್ಲಿ ಸಾವು ನೋವುಗಳು ಉಲ್ಬಣಿಸುತ್ತಿದ್ದು, ಕಾರ್ಖಾನೆಯ ಆಡಳಿತ ಮಂಡಳಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಇರುವುದೇ ಸಾವುಗಳಿಗೆ ಕಾರಣವಾಗುತ್ತಿದೆ ಎಂಬುದು ಸ್ಥಳೀಯರ ದೂರಾಗಿದೆ. ಅನೇಕ ಸಾವುಗಳು ನಡೆದರೂ ಸಹ ಸರಕಾರದ ಅಧಿಕಾರಿಗಳಾಗಲಿ, ಸ್ಥಳೀಯ ಶಾಸಕರಾಗಲಿ ಕಾರ್ಖಾನೆಗೆ ಭೇಟಿ ನೀಡದೆ ಇರುವುದು ಸಾಮಾನ್ಯ ಜನರ ಸಾವಿಗೆ ಬೆಲೆ ಇಲ್ಲವೆ ಎಂಬ ಪ್ರಶ್ನೆ ಪ್ರಜ್ಙಾವಂತರಲ್ಲಿ ಮೂಡುವಂತಾಗಿದೆ.
suddi junction
0 Comments