ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಿಕ್ಕು ಸರ್ವಜ್ಞ.
ತನಗೆ ಯಾವುದರಿಂದ ನೋವಾಗುತ್ತದೆ ಅದರಿಂದ ಬೇರೆಯವರಿಗೂ ಸಹ ಅದೇ ರೀತಿಯ ನೋವಾಗುತ್ತದೆಯೆಂದು ತಿಳಿದು ಪರರನ್ನು ನೋಯಿಸದೆ, ಪರರನ್ನು ಸಹ ತನ್ನಂತೆ ತಿಳಿದರೆ ಅಂತಹವರು ಅತಿ ಶ್ರೇಷ್ಠ ಕೈಲಾಸ ವಾಸಕ್ಕೆ ಯೋಗ್ಯರು.
ಆದರೆ “ಮೇಲು ಕೀಳೆಂಬ” ಆಚರಣೆಗಳನ್ನು ಶತ ಶತಮಾನಗಳಿಂದ ಪಾರಂಪರಿಕವಾಗಿ ರೂಢಿಸಿಕೊಂಡು ಬಂದ ಜನರು, ತನ್ನಂತೆ ಪರರು ಎನ್ನುವ ಧರ್ಮದ ಹಾಗೂ ಧಾರ್ಮಿಕ ಯತಿಗಳ ಮಾತಿನ ಕುರಿತು ಚಿಂತಿಸಲಿಲ್ಲ, ಯೋಚಿಸಲಿಲ್ಲ, ಆ ಕಡೆ ಗಮನವೇ ಕೊಡಲಿಲ್ಲ.
ಪರರಿಗೂ ತಮ್ಮಂತೆ ನೋವಾಗುತ್ತದೆಯೆಂದು ಅರಿಯಲಿಲ್ಲ.
ಪರರಿಗೂ ತಮ್ಮಂತೆ ಗೌರವ, ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯದ ಅವಶ್ಯಕತೆಯಿದೆಯೆಂದು ಚಿಂತಿಸಲಿಲ್ಲ.
ಇವುಗಳ ಅರಿವು ಮೂಡಿಸಲು, ಇವುಗಳನ್ನು ಸರ್ವರಿಗೂ ದೊರಕುವಂತೆ ಮಾಡಲು ಒಬ್ಬ ಶಕ ಪುರುಷ, ಯುಗ ಪುರುಷನೇ ಜನ್ಮ ತಳೆಯಬೇಕಾಯಿತು.
ಅವರೇ ಬಾಬಾಸಾಹೇಬ.
14ನೇ ಏಪ್ರಿಲ್ ನ ಇಂದಿನ ಅವರ ಜನ್ಮ ದಿನದಂದು ನಾವು ಈಗ ತಿಳಿಯಬೇಕಾಗಿರುವುದು ಏನು ? ಕಲಿಯಬೇಕಾಗಿರುವುದು ಏನು ?
ಅಂಬೇಡ್ಕರವರು ಯಾವುದಕ್ಕಾಗಿ ಹೋರಾಟ ಮಾಡಿದರು?
ಆ ಸಮಯದಲ್ಲಿ ಯಾವುದು ಇರಲಿಲ್ಲ ?
ಯಾವುದನ್ನು ಪಡೆಯುವದಕ್ಕೋಸ್ಕರ ಹೋರಾಟ ಮಾಡಿದರು ?
ಇವೆಲ್ಲ ಪ್ರಶ್ನೆಗಳನ್ನು ಆಳವಾಗಿ ಚಿಂತನೆ ಮಾಡಿ ಉತ್ತರವನ್ನು ಹುಡುಕಿದಾಗ, ಬಾಬಾಸಾಹೇಬರ ಜೀವನದ ಕೆಲಸಗಳು, ಅದರಿಂದ ಜನರಿಗೆ ಪ್ರಾಪ್ತವಾಗಿರುವ ಸೌಲಭ್ಯಗಳನ್ನು ಚಿಂತಿಸಿದಾಗ, ಇವೆಲ್ಲವುಗಳನ್ನು ಕೇವಲ ಒಂದು ವಾಕ್ಯದಲ್ಲಿ ಬಹಳ ಸಮಂಜಸವಾಗಿ, ಸೂಕ್ತವಾಗಿ ಸರಳವಾಗಿ ಹೇಳುವುದಾದಲ್ಲಿ ಒಂದೇ ಒಂದು ಮಾತು, ಅದುವೇ…
ತನ್ನಂತೆ ಪರರ ಬಗೆ
ತನ್ನಂತೆ ಪರರನ್ನು ಕಾಣು..
ಅಂಬೇಡ್ಕರ್ ರವರ ಹೋರಾಟದ ಹಿಂದಿನ ಮುಖ್ಯವಾದ ವಿಚಾರಗಳೆಂದರೆ, ತನ್ನನ್ನು, ತನ್ನವರನ್ನು ಇತರರಂತೆ ದೇವಾಲಯದೊಳಗೆ ಸೇರಿಸಲಿಲ್ಲ. ತನ್ನನ್ನು, ತನ್ನವರನ್ನು ಇತರರಂತೆ ಕೆರೆಯ ನೀರನ್ನು ಕುಡಿಯಲು ಬಿಡಲಿಲ್ಲ. ತನಗೆ ಹಾಗೂ ತನ್ನವರಿಗೆ ಇತರರಂತೆ ಗೌರವ ಕೊಡಲಿಲ್ಲ. ತನಗೆ ಮತ್ತು ತನ್ನವರಿಗೆ ಇತರರಂತೆ ಸಮಾನ ಹಕ್ಕು ಕೊಡಲಿಲ್ಲ. ಇವೆಲ್ಲವುಗಳ ಮುಖ್ಯ ವಿಚಾರ ತನ್ನನ್ನು, ತನ್ನವರನ್ನು ಪರರಂತೆ ಕಾಣಲಿಲ್ಲ, ಎನ್ನುವುದೇ ಆಗಿದೆ.
ಅಂಬೇಡ್ಕರ್ ಜಗತ್ತಿಗೆ ತಮ್ಮ ಕೆಲಸಗಳಿಂದ ತಿಳಿಸಿದ್ದೇನೆಂದರೆ ಮತ್ತು ಜಗತ್ತು ಇಂದು ಅವರ ಕೆಲಸಗಳಿಂದ ತಿಳಿಯಬೇಕಾಗಿರುವುದೆನೆಂದರೆ,
ತನ್ನಂತೆ ಪರರನ್ನು ಕಾಣು
ಇಂದಿನ ದಿನ ನಾವು ಸಹ ತಿಳಿಯಬೇಕಾಗಿದೆ, ಏನೆಂದರೆ ನಮಗೆ ಯಾವುದರಿಂದ ನೋವಾಗುತ್ತದೆಯೋ, ಅದರಿಂದ ಬೇರೆಯವರಿಗೂ ಸಹ ನಮ್ಮಷ್ಟೇ ನೋವಾಗುತ್ತದೆ, ದುಃಖವಾಗುತ್ತದೆ, ಕಷ್ಟವಾಗುತ್ತದೆ.
ಆದ್ದರಿಂದ ನಮ್ಮಂತೆ ಬೇರೆಯವರನ್ನು ಕಾಣೋಣ.
ಮನುಷ್ಯರಾಗಿ ಮನುಷ್ಯತ್ವವನ್ನು ಹೊಂದಿ ಮಾನವೀಯ ಗುಣ ಹೊಂದಿರುವ ಬೇರೆಯವರನ್ನು ಸಹ ನಮ್ಮಂತೆ ಮನುಷ್ಯರಾಗಿ ಕಾಣೋಣ.
ಮನುಷ್ಯರನ್ನು ಮನುಷ್ಯರಾಗಿ ಕಾಣದೆ ಇದ್ದಾಗ, ಅದನ್ನೂ ಕಡ್ಡಾಯವಾಗಿ ತಿಳಿಸಿಕೊಡುವ ಸಲುವಾಗಿ ಅಂಬೇಡ್ಕರವರಂಹ ಯುಗ ಪುರುಷರು ಜಗತ್ತಿನಲ್ಲಿ ಜನ್ಮ ತಳೆಯಬೇಕಾಗುತ್ತದೆ.
ಆದರೆ ನಾವೆಲ್ಲರೂ ಅರಿವಿನಿಂದ ಬದುಕಿದಾಗ ಅಂತಹವರ ಅವಶ್ಯಕತೆಯಿಲ್ಲ.
ನಮ್ಮ ನಡುವಳಿಕೆಗಳು, ಜೀವನ ರೀತಿಗಳಿಂದ, ಆಚರಣೆಗಳಿಂದ ಅಂತಹ ಸಂದರ್ಭ ಬರದಂತೆ ನೋಡಿಕೊಂಡರೆ ನಾವೆಲ್ಲರೂ ಅಂಬೇಡ್ಕರವರ ಜೀವನದಿಂದ ಪಾಠ ಕಲಿತಂತೆ. ಅಂಬೇಡ್ಕರ್ರವರ ಆದರ್ಶಗಳನ್ನು ಮೈಗೂಡಿಸಿಕೊಂಡಂತೆ.
ಇದನ್ನು ಸದಾ ನೆನಪಿಡೋಣ. ಮರೆಯದಿರೋಣ, ಮತ್ತೆ ಮತ್ತೆ ನೆನಪು ಮಾಡಿಕೊಳ್ಳೋಣ…
ಏನೆಂದರೆ
ತನ್ನಂತೆ ಪರರ ಬಗೆದೊಡೆ, ಕೈಲಾಸ ಬಿನ್ನಾಣವಿಕ್ಕು ಸರ್ವಜ್ಞ.
ಸೂರ್ಯನಾರಾಯಣ ಚಿಮ್ಮನಚೋಡ್ಕರ್, ಸೇಡಂ
0 Comments