ಕೈಲಾಗದವರ ಕಡೆಯ ಅಸ್ತ್ರವೇ ಅಪಪ್ರಚಾರ. ಇಂತದ್ದೊಂದು ಮಾತು ಎಲ್ಲೆಡೆ ಜನಜನಿತವಾಗಿದೆ. ಇದೇ ರೀತಿಯಲ್ಲಿ ಭಕ್ತರ ಬಾಳನ್ನು ಬೆಳಗಿ, ಮಗ, ಅಣ್ಣನ ಸ್ಥಾನದಲ್ಲಿ ನಿಂತು ಜನರ ಕಷ್ಟಗಳನ್ನು ಆಲಿಸುತ್ತಿರುವ ಪವಾಡ ಪುರುಷ ಶಹಾಪೂರ ತಾಲೂಕಿನ ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾರವರ ಮೇಲೆ ಅನೇಕ ಕಾಣದ ಕೈಗಳು ಅಪಪ್ರಚಾರ ಎಸಗುತ್ತಿರುವುದು ತೀರಾ ದುಃಖದ ಸಂಗತಿ ಎನ್ನಬಹುದು.

ತಮ್ಮಲ್ಲಿರುವ ಅಗಾಧವಾದ ಶಕ್ತಿಯನ್ನು ಕೇವಲ ಕೆಲವರಿಗಾಗಿ ಬಳಸದೆ, ಸಕಲ ಜೀವರಾಶಿಗಳ ಒಳಿತಿಗಾಗಿ ಬಳಸಿ ಭಕ್ತರ ಬಾಳಲ್ಲಿನ ಕಷ್ಟ ಕಾರ್ಪಣ್ಯಗಳನ್ನು ಅವರಿಗೆ ತಿಳಿಸಿ, ತಿದ್ದುಕೊಂಡು ಬಾಳುವಂತೆ ಪ್ರೇರೇಪಿಸುವ ಮಹಲರೋಜಾ ಮಲ್ಲಿಕಾರ್ಜುನ ಮುತ್ಯಾರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಅಪಪ್ರಚಾರ ಮಾಡುವ ಹುನ್ನಾರ ನಡೆಯುತ್ತಿದೆ.

ಒಂದು ಗ್ರಾಮ, ತಾಲೂಕು, ಜಿಲ್ಲೆಯ ಯಾವುದೇ ಗ್ರಾಮಕ್ಕೆ ಭೇಟಿ ಕೊಟ್ಟರೂ ಸಹ ಸಾವಿರಾರು ಯುವಕರು ಮಲ್ಲಿಕಾರ್ಜುನ ಮುತ್ಯಾರ ಹಿಂದೆ ಸಾಗುವುದು ಸಾಮಾನ್ಯವಾಗಿದೆ. ಅವರ ಆಗಮನದ ಮಾಹಿತಿ ದೊರೆಯುತ್ತಿದ್ದಂತೆ ನೂರಾರು ದ್ವಿಚಕ್ರ ಹಾಗೂ ಕಾರ್ ಗಳಲ್ಲಿ ಬರುವ ಭಕ್ತರು ಮುತ್ಯಾರ ದರ್ಶನ ಪಡೆಯಲು ಹಾತೊರೆಯುತ್ತಾರೆ ಅಲ್ಲದೆ ಅವರು ಬಂದು ಹೋಗುವವರೆಗೂ ಅವರ ಜೊತೆಯಲ್ಲೇ ಇದ್ದು ಮುತ್ಯಾರ ಕೃಪಾದೃಷ್ಟಿಗೆ ಪಾತ್ರರಾಗಲು ಇಷ್ಟಪಡುತ್ತಾರೆ. ಕೇವಲ ಒಂದೆರಡು ವರ್ಷದ ಆಸುಪಾಸಿನಲ್ಲೇ ಇಷ್ಟೊಂದು ಪವಾಡ ಮಾಡಿ, ಪ್ರಚಾರ ಗಿಟ್ಟಿಸಿಕೊಂಡು, ಭಕ್ತರ ಮಧ್ಯೆ ಮೆರೆಯುವ ಯುವಕನನ್ನು ನೋಡಿದರೆ ಯಾರಿಗೆ ತಾನೆ ಉರಿಯಾಗಲ್ಲ ಹೇಳಿ.

ಸತತ ನೂರಾರು ವರ್ಷ ತನು, ಮನ, ಧನದಿಂದ ಕಟ್ಟಿದ ಅನೇಕ ಮಠಗಳ ಸ್ವಾಮೀಜಿಗಳಿಗೆ, ಯಾರ್ಯಾರದೋ ಕಾಲಿಗೆ ಬಿದ್ದು ರಾಜಕೀಯ ಬಿರುದು ಪಡೆದು ಮೆರೆಯುವ ರಾಜಕಾರಣಿಗಳಿಗೆ ಈ ಪುಟ್ಟ ಪೋರ ಬಂದು ಪೈಪೋಟಿ ನೀಡಿದರೆ ಯಾರಿಗೆ ತಾನೆ ಉರಿಯಾಗಲ್ಲ ಹೇಳಿ. ಹಾಗಂತ ಬೇರೆ ಮಠಾಧೀಶರು ಅಥವಾ ರಾಜಕಾರಣಿಗಳ ತೇಜೋವಧೆಗೆ ಮಲ್ಲಿಕಾರ್ಜುನ ಮುತ್ಯಾ ಎಂದೂ ಸಹ ಮುಂದಾದವರಲ್ಲ. ಅನೇಕ ವೇದಿಕೆ ಕಾರ್ಯಕ್ರಮಗಳಿಗೆ ತೆರಳಿದಾಗ ವೇದಿಕೆಯಲ್ಲಿರುವ ಅನೇಕ ಮಠಾಧೀಶರು, ರಾಜಕಾರಣಿಗಳನ್ನು ಬಿಟ್ಟು ನೆರೆಯುವ ಸಾವಿರಾರು ಜನರು ಮಲ್ಲಿಕಾರ್ಜುನ ಮತ್ಯಾ ಬಂದ ಮೇಲೆ ಇವರತ್ತ ವಾಲುತ್ತಾರೆ. ಇದರಿಂತೆ ಅನೇಕ ಕಡೆಗಳಲ್ಲಿ ವೇದಿಕೆಯ ಗಣ್ಯರಿಗೂ ಮುಜುಗರ ಉಂಟಾದ ಪ್ರಸಂಗ ಜರುಗಿವೆ. ಇವನ್ನರಿತ ಕೂಡಲೇ ಮಲ್ಲಿಕಾರ್ಜುನ ಮುತ್ಯಾ ಅವರು ಯಾವುದೇ ಕಾರ್ಯಕ್ರಮವಿರಲಿ ಮುಗಿಯುವ ಹೊತ್ತಿಗೆ ತೆರಳುತ್ತಿದ್ದಾರೆ. ಅದೂ ಸಹ ಕೇವಲ 5 ನಿಮಿಷಗಳ ಕಾಲ ಅಲ್ಲಿದ್ದು, ಹೊರಡುತ್ತಿದ್ದಾರೆ. ಇದಲ್ಲವೇ ನಿಜವಾದ ಗೌರವ.

ಬಾಬುರಾವ ಚಿಂಚನಸೂರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುರುಮಠಕಲ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಬುರಾವ ಚಿಂಚನಸೂರ ಮತ್ತು ಮಲ್ಲಿಕಾರ್ಜುನ ಮುತ್ಯಾರ ನಡುವೆ ನಡೆದ ಸಂಭಾಷಣೆ ತೀರಾ ವೈರಲ್ ಆಗಿತ್ತು. ಅದರಲ್ಲಿ ಮಲ್ಲಿಕಾರ್ಜುನ ಮುತ್ಯಾ ಬಾಬುರಾವ ಚಿಂಚನಸೂರ ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದಾರೆ ಎಂದಿದ್ದರು. ನಂತರ ಬಾಬುರಾವ ಸೋಲುಂಡಿದ್ದರು. ಮುತ್ಯಾ ಹೇಳಿದ ಮೇಲೂ ಸಹ ಬಾಬುರಾವ ಸೋಲಾಗಿದೆ ಎಂದು ಅಪಪ್ರಚಾರ ಮಾಡಲಾಗಿತ್ತು. ಆದರೆ ನಿಜಾಂಶ ಏನೆಂದರೆ ದೂರವಾಣಿ ಸಂಭಾಷಣೆಯಲ್ಲಿ ಎಲ್ಲೂ ಸಹ ಮಲ್ಲಿಕಾರ್ಜುನ ಮುತ್ಯಾ ಬಾಬುರಾವ ಚಿಂಚನಸೂರ ಗೆಲ್ಲುತ್ತಾರೆ ಎಂದಿರಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಮುತ್ಯಾ, ಭಕ್ತರಿಗೆ ನೋವುಂಟು ಮಾಡುವುದು ಸರಿಯಲ್ಲ. ಅವರು ನನ್ನ ಭಕ್ತರು ಅವರ ಮನಸಂತುಷ್ಟಿಗಾಗಿ ಏನು ಹೇಳಬೇಕೊ ಹೇಳಿದ್ದೇನೆ ಎಂದಿದ್ದರು. ಇದರಲ್ಲಿ ಇನ್ನೊಂದು ವಿಷಯ ಓದುಗರು ಗಮನಿಸಬೇಕು. ಮಲ್ಲಿಕಾರ್ಜುನ ಮುತ್ಯಾರ ಪವಾಡದ ಮಾತುಗಳು ಅವರು ತಮ್ಮ ಆಸ್ಥಾನ ಅಂದರೆ ಮಹಲರೋಜಾದಲ್ಲಿದ್ದಾಗ ತಿಳಿಸಿರುವುದು ಮಾತ್ರ ಫಲಿಸುತ್ತವೆ.

ತಮ್ಮ ಬಿಟ್ಟಿ ಪ್ರಚಾರಕ್ಕಾಗಿಯೋ ಅಥವಾ ಬೇರೊಬ್ಬರ ಪ್ರಭಾವಕ್ಕೆ ಒಳಗಾಗಿ ಮಲ್ಲಿಕಾರ್ಜುನ ಮುತ್ಯಾರ ತೇಜೋವಧೆ ಮಾಡಲೊ, ಕೆಲವರನ್ನು ಮೆಚ್ಚಿಸಲಿಕ್ಕಾಗಿಯೋ ? ಒಬ್ಬ ಭಕ್ತರ ದೈವಸ್ವರೂಪಿ ಮುತ್ಯಾರಿಗೆ ಅಪಪ್ರಚಾರ ಮಾಡುವುದು ಒಂದೇ ಧರ್ಮಕ್ಕೆ ಕೇಡು ಬಗೆಯುವುದೂ ಒಂದೆ.

 

Share here
Categories: State

0 Comments

Leave a Reply

Avatar placeholder

Your email address will not be published. Required fields are marked *