ಈ ದೇವಾಲಯಕ್ಕಿದೆ 1200 ವರ್ಷಗಳ ಇತಿಹಾಸ. ಈ ದೇವನಿಗೆ ಭಕ್ತಿಯಿಂದ ನಮಿಸಿದರೆ ಸರ್ವ ದುಃಖ ಪರಿಹಾರವಾಗಿ, ಸುಖ ಶಾಂತಿ ಜೀವನದಲ್ಲಿ ನೆಲೆಸುತ್ತದೆ. ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ಹೀಗೆ ನಾನಾ ರಾಜ್ಯಗಳ ಭಕ್ತರಿಗೆ ಈತನೇ ಆರಾಧ್ಯದೈವ. ದೇವಾಲಯಕ್ಕೆ ತಿರುಪತಿಯ ತಿಮ್ಮಪ್ಪನ ಮಹಾದ್ವಾರವೆಂದು ಕರೆಯಲಾಗುತ್ತದೆ.
ಸ್ವಯಂ ಉದ್ಭವ ಮೂರ್ತಿಯಾಗಿ ಭಕ್ತರ ಇಷ್ಟಾರ್ಥ ನೆರವೇರಿಸುತ್ತಿರುವ ಈ ಮಹಾಬಲನಿಗೆ ತಿರುಪತಿಯ ತಿಮ್ಮಪ್ಪನಿಗೆ ಸಲ್ಲುವ ಎಲ್ಲಾ ಸೇವೆಗಳು ಯಥಾವತ್ತಾಗಿ ಸಲ್ಲುತ್ತವೆ. ಇಷ್ಟಕ್ಕೂ ಈ ಬಲಭೀಮಸೇನ ನೆಲೆಸಿರುವುದು ಎಲ್ಲಿ ಅಂತೀರಾ. ಕರ್ನಾಟಕದ ಕಲಬುರಗಿಯ ಜಿಲ್ಲೆಯ ಸೇಡಂ ತಾಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ.
ಬೇಡಿದ ವರ ನೀಡುವ ಮೋತಕಪಲ್ಲಿ ಬಲಭೀಮಸೇನ ದೇವರಿಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ದಿನಕಳೆದಂತೆ ಭಕ್ತರ ಪಾಲಿನ ಕಾಮಧೇನುವಾಗಿದೆ. ಶನಿವಾರ,ಅಮಾವಾಸೆ,ಹುಣ್ಣಿಮೆ ದಿನ ಬೆಳಗ್ಗೆಯಿಂದ ಸಂಜೆವರೆಗೆ ಭಕ್ತ ಸಮೂಹವೇ ನೆರೆದಿರುತ್ತದೆ.
ಹನುಮಂತನು ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಹೋಗುತ್ತಿರುವ ಮಾರ್ಗದಲ್ಲಿ ಋುಷಿ ಮುನಿಗಳ ತಪಸ್ಸಿಗೆ ಮೆಚ್ಚಿ ದರ್ಶನವಿಟ್ಟರು. ಮುಂದೆ ಇದೇ ಸ್ಥಳದಲ್ಲಿ ಅಸೀನರಾಗಬೇಕು ಎಂದು ಹನುಮಂತನಲ್ಲಿ ಋುಷಿ ಮುನಿಗಳು ಬೇಡಿಕೊಂಡಾಗ ಅಭಯ ನೀಡಿದರು. ಕಾಲ ಕ್ರಮೇಣ ಇಲ್ಲಿಯ ಮಾಂಡಲೀಕ ರಾಜನಾಗಿದ್ದ ಕಾಕಲವಾರದ ದೊರೆ ರಾಜಾ ಲಕ್ಷ್ಮಣಪ್ಪ ನಾಯಕ ಅವರಿಗೆ ಸ್ವಪ್ನದಲ್ಲಿ ನಿನ್ನ ಕ್ಷೇತ್ರದಲ್ಲಿ ನಾನಿದ್ದೇನೆ. ಶೋಧನೆ ಮಾಡಿ ಆಲಯ ನಿರ್ಮಿಸಬೇಕು ಎಂದು ಆಜ್ಞೆ ಮಾಡಿದನಂತೆ. ಅದರಂತೆ ಮೋತಕಪಲ್ಲಿಯಲ್ಲಿ ಭವ್ಯ ದೇವಾಲಯ ನಿರ್ಮಿಸಿದರು. ಇದು ಚಾಲುಕ್ಯ ವಿಕ್ರಮಾದಿತ್ಯ ಕಾಲದಲ್ಲಾಗಿದೆ ಎಂದು ಇತಿಹಾಸವಿದೆ.
ಕೆಲ ದಿನಗಳ ಕಾಲ ಪೂಜಾ ವಿಧಿ ವಿಧಾನಗಳು ನಡೆಯುತ್ತಿರುವಾಗ ಒಂದು ದಿನ ರಾತ್ರಿ ಕಳ್ಳರು ಆಗಮಿಸಿ,ದೇವರ ಕೆಳಗೆ ನಿಧಿ ಇರಬಹುದು ಎಂದು ಶಂಕಿಸಿ,ಮೂರ್ತಿಯನ್ನು ಭಗ್ನಗೊಳಿಸಿದರು.ಇದು ಸ್ವಯಂ ಭೂ ಮೂರ್ತಿಯಾಗಿರುವುದರಿಂದ ಆ ಕಳ್ಳರಿಗೆ ಏನು ಸಿಗಲಿಲ್ಲ. ಮೂರ್ತಿ ಭಗ್ನಗೊಳಿಸಿರುವುದರಿಂದ ಹಿಂದೂ ಧರ್ಮದ ಪ್ರಕಾರ ಪೂಜೆ ಮಾಡಲು ಬರುವುದಿಲ್ಲ ಎಂದು ಊರ ಹಿರಿಯರು, ಅರ್ಚಕರು ಸೇರಿ ಇನ್ನೊಂದು ಹನುಮಂತ ದೇವರ ಮೂರ್ತಿಯನ್ನು ಸುಮಾರು 3 ಅಡಿ ಎತ್ತರ ವಿಗ್ರಹ ತಯಾರಿಸಿ ಒಂದು ಶುಭದಿನದಲ್ಲಿ ಪ್ರತಿಷ್ಠಾಪಿಸಿಲು ನಿರ್ಧರಿಸಿದರು.
ಆ ಮೂರ್ತಿ ಆರು ಅಡಿ ಎತ್ತರದವರೆಗೆ ಬೆಳೆದಿದೆ. ಇದು ಈಗಲೂ ನೋಡಬಹುದಾಗಿದೆ. ಆಗ ಮತ್ತೆ ಸ್ವಪ್ನದಲ್ಲಿ ಆಮೂರ್ತಿ ಬೇಡ. ಆವಯವಗಳನ್ನು ಪುಷ್ಕರಣಿಯಲ್ಲಿ ಹಾಕಿದ್ದಾರೆ. ಅದನ್ನು ತೆಗೆದುಕೊಂಡು ಬಂದು ಪುನಃ ಜೋಡಿಸಿ, 41 ದಿನಗಳ ಪರ್ಯಂತ ಗರ್ಭಗುಡಿ ಬಾಗಿಲು ಮುಚ್ಚಿ ಹಾಲು ಅನ್ನ ನೈವೇದ್ಯ ಮಾಡಿ ಅರ್ಚಕರು ಅದೇ ಊಟ ಮಾಡಬೇಕು ಎಂದು ಅರ್ಚಕರ ಕನಸಿನಲ್ಲಿ ಆಜ್ಞೆ ಮಾಡಿದ.ಆದರೆ, ಒಂದು ದಿನ ಅಪಥ್ಯ ಮಾಡಿದ್ದರಿಂದ ಎದೆ ಮತ್ತು ಹಣೆಯ ಭಾಗದಲ್ಲಿ ರಕ್ತ ಕಾಣಿಸಿಕೊಂಡಿದ್ದು,ಕಂಡು ಬರುತ್ತದೆ.
ಆಗ ಎದೆಯಲ್ಲಿ ನರಸಿಂಹ ಸಾಲಿಗ್ರಾಮ,ಹಣೆಯಲ್ಲಿ ವಾಸುದೇವ ಸಾಲಿಗ್ರಾಮ ಇಟ್ಟು ಪೂಜಿಸಿದರೆ, ಭಿನ್ನವಾದ ದೋಷವಿರುವುದಿಲ್ಲ ಎಂದು ದೇವರ ಆದೇಶವಾಗಿತ್ತದೆ. ಈ ಮೂರ್ತಿ ಹಿಂದೆ ಮುತ್ತುಗದ ಎಲೆ ಗಿಡದ ಬಡ್ಡಿ ಹುಟ್ಟಿರುವುದರಿಂದ ಈಗ ಈ ಗ್ರಾಮಕ್ಕೆ ಮೋತಂಪಲ್ಲಿ ಕಾಲ ಕ್ರಮೇಣ ಈಗ ಮೋತಕಪಲ್ಲಿಯಾಗಿರುತ್ತದೆ ಎನ್ನುತ್ತಾರೆ ದೇವಸ್ಥಾನ ಅರ್ಚಕ ಭೀಮಾಚಾರ್ಯರು.
ಲಕ್ಷಾಂತರ ಭಕ್ತರ ಪಾಲಿಗೆ ಈತ ಆರಾಧ್ಯ ದೈವ
ಇಲ್ಲಿಗೆ ಬರುವ ಭಕ್ತರು ಜಿಲ್ಲೆ ಮಾತ್ರವಲ್ಲ ಆಂಧ್ರಪ್ರದೇಶ, ತೆಲಂಗಾಣಾ,ಮಹಾರಾಷ್ಟ್ರ,ಗುಜರಾತ ಸೇರಿದಂತೆ ನಾನಾ ಕಡೆಯಿಂದ ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಬರುವ ಬಹುತೇಕ ಭಕ್ತರು ತಮಗೆ ಸುಖ,ಸಮೃದ್ಧಿ,ಸಂತೋಷ ಹಾಗೂ ಸಂತಾನ ಭಾಗ್ಯ,ವಿವಾಹ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ. ಇದಲ್ಲದೇ ಮಾಟಮಂತ್ರ,ಭೂತ ಗಾಳಿ, ಸೊಂಕಿದವರು ಕೂಡಾ ಇಲ್ಲಿಗೆ ದೇವಸ್ಥಾನಕ್ಕೆ ಆಗಮಿಸಿ,11 ದಿನ ಇಲ್ಲವೇ 41 ದಿನಗಳ ಕಾಲ ದೇವರ ದರ್ಶನ ಮಾಡುತ್ತಾರೆ ಎನ್ನುತ್ತಾರೆ ಸ್ಥಳೀಯರು.
ಜಾತ್ರಾ ಮಹೋತ್ಸವ
ಪ್ರತಿ ವರ್ಷ ಮಾರ್ಗಶಿರ ಮಾಸದಲ್ಲಿ 11 ದಿನ ಉತ್ಸವ ನಡೆಯಲಿದೆ.ಅದರಲ್ಲಿ ಹುಣ್ಣಿಮೆ ದಿನ ಮಹಾರಥೋತ್ಸವ ರಾತ್ರಿ 12 ಗಂಟೆಗೆ ನಡೆಯಲಿದೆ.ಸುಮಾರು 20 ದಿನಗಳ ಕಾಲ ಜಾತ್ರೆ ನಡೆಯಲಿದೆ.ಇನ್ನೂ ಮಾಘ ಮಾಸದಲ್ಲಿ ರಥಸಪ್ತಮಿ ಕಾರ್ಯಕ್ರಮ ನಡೆಯಲಿದ್ದು, ಒಂದೇ ದಿನ 7 ವಾಹನ ಜರುಗತ್ತದೆ.ಇವುಗಳಲ್ಲಿ ಪಲ್ಲಕ್ಕಿ ಸೇವೆ,ಅಶ್ವ ಸೇವೆ,ಮಯೂರ ಸೇವೆ,ಸಿಂಹ ಸೇವೆ,ಮಂಟಪ ಸೇವೆ, ಕಲ್ಪವೃಕ್ಷ ಸೇವೆ, ಗಜವಾಹನ ಸೇವೆಗಳು ನಡೆಯಲಿದೆ.ಇದಲ್ಲದೇ ಪ್ರತಿನಿತ್ಯ ಎರಡು ಭಾರಿ ಪೂಜೆ ಕೈಂಕರ್ಯಗಳು ನಡೆಯಲಿದೆ. ಈ ಬಲಭೀಮಸೇನ ದರ್ಶನಕ್ಕೆ ಹೆಚ್ಚಾಗಿ ಜನರು ಪ್ರತಿ ಶನಿವಾರ,ಅಮಾವಾಸೆ,ಹುಣ್ಣಿಮೆ ದಿನದಂದು ಭಕ್ತ ಸಮೂಹವೇ ಹರಿದು ಬರುತ್ತದೆ.
ಬಲಭೀಮಸೇನ ವಿಶೇಷ ;
ಮೋತಕಪಲ್ಲಿಯ ಈ ಅಂಜನೇಯನಿಗೆ ಬಲಭೀಮಸೇನ ಎಂದು ಹೆಸರು ಬರಲು ಮೂಲ ಮೂರ್ತಿ ಕೈಯಲ್ಲಿ ಸೌಗಂಧಿಕ ಪುಷ್ಪ ಇದ್ದಿರುವುದೇ ಕಾರಣ ಎನ್ನಲಾಗುತ್ತಿದೆ.ಈ ದೇವರಿಗೆ ಹೋಳಿಗೆ,ಪಾಯಸ ಇಷ್ಟವಂತೆ.ಇಲ್ಲಿ ಮಾಧ್ವ ಶಾಸ್ತ್ರದ ಪ್ರಕಾರ ಪೂಜಾ ವಿಧಿ ವಿಧಾನಗಳು ನಡಯುತ್ತವೆ.
ದೇವಸ್ಥಾನಕ್ಕೆ ತಲುಪುವುದು ಹೇಗೆ ?
ಇಲ್ಲಿನ ಭೀಮಸೇನ ದೇವಸ್ಥಾನ ದರ್ಶನಕ್ಕೆ ಸೇಡಂ ನಿಂದ ಗುರುಮಠಕಲ್‌ಗೆ ಹೋಗುವ ಬಹುತೇಕ ಎಲ್ಲಾ ಸಾರಿಗೆ ಬಸ್‌ಗಳು ಹಾದು ಹೋಗುತ್ತವೆ.ಇನ್ನೂ ಸೇಡಂ,ಗುರುಮಠಕಲ್‌ನಿಂದ ಸಾರಿಗೆ ಸೌಲಭ್ಯವಿದೆ.ಸೇಡಂ ತಾಲೂಕು ಕೇಂದ್ರದಿಂದ 30,ಗುರುಮಠಕಲ್ ಪಟ್ಟಣದಿಂದ 11ಕಿ.ಮೀಟರ್ ದೂರದಲ್ಲಿದೆ.
* ಸೇಡಂನಿಂದ 30,ಗುರುಮಠಕಲ್‌ನಿಂದ 11 ಕಿ.ಮೀ ದೂರ
* ಮೋತಕಪಲ್ಲಿಗೆ ಹೋಗಿಬರಲು ಸಾರಿಗೆ ಸೌಲಭ್ಯವಿದೆ
* ಈ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ವ್ಯಾಪ್ತಿಯಲ್ಲಿದೆ
* ಇಲ್ಲಿ ಜೈ ಹನುಮಾನ, ಜೈ ಶ್ರೀರಾಮ ಘೋಷಣೆ ಬದಲು ಗೋವಿಂದಾ ಗೋವಿಂದಾ !
* ತಿಮ್ಮಪ್ಪನಿಗೆ ಸಲ್ಲುವ ಎಲ್ಲಾ ಪೂಜೆ ಕೈಂಕರ್ಯಗಳು ಭೀಮಸೇನನಿಗೂ ಸಲ್ಲುತ್ತದೆ.
* ಲಕ್ಷಾಂತರ ಭಕ್ತರ ಪಾಲಿನ ಆರಾಧ್ಯ ಧೈವ ಈ ಬಲಭೀಮಸೇನ
0 Comments